ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ರಾಮನಗರ: ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ ಹಾಗೂ ಆತನ ವಿರುದ್ಧ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಮಹಿಳೆ ತನಗೆ ನ್ಯಾಯ ಸಿಗಲಿಲ್ಲವೆಂದು ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಪೊಲೀಸ್ ಭವನದಲ್ಲಿ ಸೋಮವಾರ ಸಂಜೆ ನಡೆದಿದೆ. ಮಾಗಡಿಯ ಉಮಾದೇವಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಪೊಲೀಸರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಮಾದೇವಿ ಸೋಮವಾರ ಮಧ್ಯಾಹ್ನ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು. ಕಚೇರಿಯಿಂದ ಹೋಗುವಾಗ ಮಹಿಳೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅವರ ಜೊತೆ ಬಂದಿದ್ದ ವಕೀಲರೊಬ್ಬರು ಹೇಳಿದರು. ಮಹಿಳೆ ಎಲ್ಲಿ ವಿಷ ಸೇವಿಸಿದರು ಎಂಬುದರ ಮಾಹಿತಿ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ತಿಳಿಸಿದರು.ಮಹಿಳೆ ದಯಾನಂದ ಎಂಬ ಯುವಕನ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಮಹಿಳಾ ಪೊಲೀಸ್ ಠಾಣೆಯಲ್ಲಿ ಏಪ್ರಿಲ್‌ನಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆದು ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿರುವ ಹೊತ್ತಿನಲ್ಲಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ. ತನ್ನ ಪ್ರಕರಣದ ವಿಷಯದಲ್ಲಿ ಪೊಲೀಸರು ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದ ಮಹಿಳೆ, ನ್ಯಾಯ ಕೋರಿ ಜುಲೈ ತಿಂಗಳಲ್ಲಿ ಪೊಲೀಸರ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು. ಈ ಘಟನೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ದ ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಬೆದರಿಕೆವೊಡ್ಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.