ಪಟ್ಟಣದಲ್ಲಿ ಸೆ.13ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿದ್ದ ವೇದಿಕೆಯಿಂದ ದಲಿತ ಅಧಿಕಾರಿಯನ್ನು ಬಲವಂತವಾಗಿ ತೆರಳುವಂತೆ ಮಾಡಿರುವುದನ್ನು ತಾಪಂ ಮಾಜಿ ಸದಸ್ಯ ಮಾಡಬಾಳ್ ಜಯರಾಂ ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧಮಂತ್ರಿಗಳು, ಶಾಸಕರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದ ವೇದಿಕೆಯಲ್ಲಿ ರಾಮನಗರ ಜಿಲ್ಲಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜಾದೇವಿ ಅವರನ್ನು ದಲಿತ ಸಮುದಾಯದ ಮಹಿಳೆ ಎಂಬ ಕಾರಣದಿಂದಾಗಿ ವೇದಿಕೆಯಿಂದ ಹಿಂದೆ ಸರಿಯುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಮಾರಂಭದ ಆಯೋಜಕರು ಹಿಂದೆಸರಿಯುವಂತೆ ಮಾಡಿರುವುದು ಅವಮಾನ. ಇನ್ನು ಮುಂದೆಯಾದರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಯೋಜಿಸುವ ಸಭೆಗಳು ಶಿಷ್ಟಾಚಾರದಿಂದ ಕೂಡಿರುವಂತೆ ಗಮನಹರಿಸಬೇಕೆಂದು ಒತ್ತಾಯಿಸಿದರು. ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ ಮಾತನಾಡಿ, ದಲಿತ ಸಮುದಾಯದ ಅಧಿಕಾರಿಗಳಿಗಾಗಲಿ ಅಥವಾ ಮುಖಂಡರಿಗಾಗಲಿ ದೊಡ್ಡಮಟ್ಟದ ಕಾರ್ಯಕ್ರಮದಲ್ಲಿ ಸೂಕ್ತ ಸ್ಥಾನ ನೀಡಬೇಕು. ದಲಿತ ಸಮುದಾಯದ ಅಧಿಕಾರಿಯನ್ನು ಅವಮಾನಿಸಿರುವುದು ದುರದೃಷ್ಟಕರ. ಈ ಘಟನೆಯಿಂದ ಮಹಿಳಾ ಅಧಿಕಾರಿ ಬಹಳ ಬೇಸರ ವ್ಯಕ್ತಪಡಿಸಿದರು. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದರು. ಹಿರಿಯ ದಲಿತ ಮುಖಂಡರಾದ ಹನುಮಂತಯ್ಯ ಮಾತನಾಡಿ, ಶಾಸಕರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ತಾಲೂಕಿನ ದಲಿತ ಮುಖಂಡರನ್ನು ಮುಖ್ಯವಾಹಿನಿಗೆ ತರಬೇಕೆಂದರು. ದಲಿತ ಮುಖಂಡರಾದ ಹನುಮಂತಯ್ಯ, ಪುಟ್ಟಸ್ವಾಮಿ ಇತರರು ಹಾಜರಿದ್ದರು.