ಕೃಷಿ ಪ್ರಶಸ್ತಿಗೆ ಅರ್ಜಿ
ರಾಮನಗರ: ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು, ರೈತರಲ್ಲಿ ಒಂದು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಆಹ್ವಾನಿಸಲಾಗಿದ್ದ ಕೃಷಿ ಪ್ರಶಸ್ತಿ ಅರ್ಜಿಯ ಅವಧಿಯನ್ನು ಸೆ. 10ರ ವರೆಗೆ ವಿಸ್ತರಿಸಲಾಗಿದೆ. ಅದರಂತೆ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಮನಗರ ಜಿಲ್ಲೆಗೆ ರಾಗಿ (ಮಳೆಯಾಶ್ರಿತ) ಬೆಳೆಯನ್ನು ಕೃಷಿ ಪ್ರಶಸ್ತಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಬೆಳೆ ಸ್ಪರ್ಧೆಗೆ ಆಸಕ್ತ ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತಿಯುಳ್ಳ ರೈತ/ರೈತ ಮಹಿಳೆಯರು ಹತ್ತಿರದ ರೈತ ಸಂಪರ್ಕ ಕೇಂದ್ರ/ಸಾರ್ವಜನಿಕ ಸೇವಾ ಕೇಂದ್ರದ ಮೂಲಕ ಆನ್‌ಲೈನ್ ತಂತ್ರಾಂಶದಲ್ಲಿ ಅರ್ಜಿಯನ್ನು ನೋಂದಾಯಿಸಬಹುದು. ನೋಂದಣಿಗೆ ಶುಲ್ಕ ಇಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಅಗತ್ಯ ದಾಖಲಾತಿಗಳಾದ ಪಹಣಿ ಪತ್ರಿಕೆ, ರೈತರ ಛಾಯಾಚಿತ್ರ, ಆಧಾರ್ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಾದಲ್ಲಿ ಜಾತಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಆನ್‌ಲೈನ್ ತಂತ್ರಾಂಶದಲ್ಲಿ ದಾಖಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ, ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.